1908-. ಫ್ರೆಂಚ್ ಮಾನವಶಾಸ್ತ್ರಜ್ಞ. 1908ರಲ್ಲಿ ಜನಿಸಿದ. ಈತ ಸೊರ್ಬೊನ್ನೆಯಲ್ಲಿ ಶಿಕ್ಷಣ ಪಡೆದು 1935ರಲ್ಲಿ ಬ್ರಜಿಲ್‍ನ ಸಾವೊಪೋಲೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ. ಇವನು 1942ರಿಂದ 1945ರ ವರೆಗೆ ನ್ಯೂಯಾರ್ಕ್‍ನ ಸಾಮಾಜಿಕ ಸಂಶೋಧನಾ ನವೋದಯ ಶಾಲೆಯಲ್ಲಿ ಸಂದರ್ಶನ ಪ್ರಾಧ್ಯಾಪಕನಾಗಿದ್ದ. ಒಂದು ವರ್ಷ ಕಾಲ ಅಮೆರಿಕೆಯಲ್ಲಿ ಫ್ರೆಂಚ್ ರಾಯಭಾರಿ ಕಛೇರಿಯಲ್ಲಿ ಸಾಂಸ್ಕೃತಿಕ ಸಲಹೆಗಾರನಾಗಿದ್ದ. 1949-50ರಲ್ಲಿ ಇವನು ಪ್ಯಾರಿಸ್‍ನ ಮಸೀ ಡಿ ಹೊಮ್ಮೆಯ ಸಹನಿರ್ದೇಶಕನಾಗಿದ್ದ. 1959ರಿಂದ ಕಾಲೇಜ್ ಡಿ ಫ್ರಾನ್ಸ್‍ನಲ್ಲಿ ಸಾಮಾಜಿಕ ಮಾನವಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಅಲ್ಲದೆ 1950ರಿಂದ ಪ್ಯಾರಿಸ್‍ನ ಇಕೋಲೆ ಪ್ರಟಿಕ್ ಡೆಸ್ ಹಾಟೆಸ್ ಎಟೂಡ್ಸ್‍ನಲ್ಲಿ ಅಧ್ಯಯನ ನಿರ್ದೇಶಕನಾಗಿದ್ದ. ಇವರು ತನ್ನ ಮಹತ್ತ್ವದ ಕೊಡುಗೆಗಳಿಗಾಗಿ ಅನೇಕ ರಾಷ್ಟ್ರಗಳ ಗೌರವ ಪ್ರಶಸ್ತಿಗಳನ್ನು ಪಡೆದಿದ್ದಾನೆ. 1949ರ ಪ್ರಿಕ್ಸ್ ಪಾಲ್ ಪೆಲಿಯಟ್ ಪ್ರಶಸ್ತಿಯನ್ನು ಗಳಿಸಿದ. 1965ರ ಹಕ್ಸ್‍ಲೀ ಮೆಮೊರಿಯಲ್ ಮೆಡಲ್ ವಿಜೇತ. 1973ರಿಂದ ಫ್ರೆಂಚ್ ಅಕಾಡೆಮಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾನೆ. ಇವನ ಪ್ರಮುಖ ಕೃತಿಗಳಲ್ಲಿ ಕೆಲವು: ಸ್ಟ್ರಕ್ಚರಲ್ ಆಂತ್ರೊಪಾಲಜಿ (1958), ಎಲ್. ಆರಿಜನ್ ಡೆಸ್ ಮ್ಯಾನೀರೆರ್ಸ್ ಡಿ ಟೇಬಲ್ (1960), ಲಾ ಪಿನ್ಸೀ ಸವೇಜ್ (1962), ಲೆ ಕ್ರುಟ್ಲ್ ಕ್ಯುಟ್ (1964), ದಮೀಲ್ ಆಕ್ಸ್ ಸೆಂಡ್ರೆಸ್ (1967), ಟೊಟೆಮಿಸಂ (1969), ಎಲ್. ಹೊಮ್ಮೆನು (1971) ಮತ್ತು ಟ್ರೆಸ್ಟೆಸ್ ಟ್ರಾಪಿಕ್ಸ್ (1976).

ಇವನ ‘ಸ್ಟ್ರಕ್ಚರಲ್ ಆಂತ್ರೊಪಾಲಜಿ’ ಗ್ರಂಥದ ಮೊದಲ ಸಂಪುಟ ಹೊರಬಂದಾಗ ಅದು ಪಾಶ್ಚಾತ್ಯ ವಿದ್ವತ್ ಪ್ರಪಂಚದ ಅತ್ಯಂತ ಪ್ರಭಾವಶಾಲಿ ಮಾನವಶಾಸ್ತ್ರಜ್ಞನೆಂಬ ಖ್ಯಾತಿಯನ್ನು ಇವನಿಗೆ ತಂದುಕೊ ಟ್ಟಿತು. ಭಾಷೆ, ಸಾಮಾಜಿಕ ಜೀವನ, ಪುರಾಣ ಮತ್ತು ಕಲೆಯಂಥ ಸಂಸ್ಕೃತಿ ವಿಷಯಗಳನ್ನು ವಿವರಿಸಲು ಮತ್ತು ವಿಶ್ಲೇಷಿಸಲು ಅವುಗಳ ನಡುವಿನ ಮೂಲಭೂತ ಸಂಬಂಧಗಳನ್ನು ಹೇಳಲು ಇವನು ರಾಚನಿಕ ವಿಧಾನಗಳನ್ನು ರೂಪಿಸಿದ ಮತ್ತು ಬಳಸಿದ. ಆ ಕೃತಿಯ ಎರಡನೆಯ ಸಂಪುಟವಂತೂ ಮಾನವಶಾಸ್ತ್ರ ಕ್ಷೇತ್ರದ ಒಂದು ಮಹತ್ತ್ವದ ಕೊಡುಗೆಯಾಗಿದೆ. ಬೌದ್ಧಿಕ ಮತ್ತು ಸಾಂಸ್ಕೃತಿಕ ಜೀವನಕ್ಕೆ ಇವನು ನೀಡಿದ ಅತ್ಯುತ್ತಮ ಕಾಣಿಕೆಯೆನಿಸಿದೆ. ಈ ಸಂಪುಟದಲ್ಲಿ ನಾಲ್ಕು ಪ್ರಧಾನ ಅಧ್ಯಾಯಗಳಿದ್ದು ಅದರಲ್ಲಿ ಇವನು ಮಾನವಶಾಸ್ತ್ರಜ್ಞರು ಮತ್ತು ಮಾನವಶಾಸ್ತ್ರಜ್ಞೇತರಿಗೆ ಸಂಬಂಧಿಸಿದ ಹಲವು ಮಹತ್ತ್ವದ ವಿಚಾರಗಳ ಕಡೆಗೆ ಗಮನ ಸೆಳೆದಿದ್ದಾನೆ. ಒಟ್ಟಿನಲ್ಲಿ ಈ ಸಂಪುಟ ಆಧುನಿಕ ಮಾನವಶಾಸ್ತ್ರೀಯ ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಅಪೂರ್ವ ಕೊಡುಗೆಯಾಗಿದೆ. ಅಲ್ಲದೆ ಪ್ರಪಂಚದ ಸಂಸ್ಕೃತಿಗಳ ಅತಿಪ್ರಮುಖ ವ್ಯಾಖ್ಯಾನಕಾರನೊಬ್ಬನ ಮನಸ್ಸಿನ ಒಳತೋಟಿಯನ್ನು ತೆರೆದು ತೋರಿಸುತ್ತದೆ. ಇಷ್ಟು ಮಹತ್ತ್ವದ ಅಧ್ಯಯನವನ್ನು ಇವನ ಸಮಕಾಲೀನ ಸಹೋದ್ಯೋಗಿಯೊಬ್ಬ ಮಾಡಿರುವ ನಿದರ್ಶನವಿಲ್ಲ. ಈ ಗ್ರಂಥದ ಎಲ್ಲ ಅಧ್ಯಾಯಗಳೂ ಇವನ ಅಧ್ಯಯನಾಸಕ್ತಿ, ಸಾಮಥ್ರ್ಯದ ಪರಿಚಯ ಮಾಡಿಕೊಡುವುದರೊಂದಿಗೆ ಮಾನವ ಸಮಾಜ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಇವನು ನೀಡಿದ ಸೈದ್ಧಾಂತಿಕ ಕೊಡುಗೆಯ ಬೆಳೆವಣಿಗೆಯಾಗಿದೆ ಎಂದು ಹೇಳಬಹುದು. ಇಪ್ಪತ್ತನೆಯ ಶತಮಾನದ 20 ಮತ್ತು 30ರ ದಶಕಗಳಲ್ಲಿ ಸಾಮಾಜಿಕ ವಿಜ್ಞಾನಗಳ ಅಧ್ಯಯನದಲ್ಲಿ ರಾಚನಿಕ ವಿಶ್ಲೇಷಣಾಕ್ರಮ ಪ್ರಸಿದ್ಧಿಗೆ ಬಂದಿತು. ಆದರೆ ಜಾನಪದ ಅಧ್ಯಯನದಲ್ಲಿ ಮಾತ್ರ 1928ರ ವರೆಗೂ ಅದೇ ಹಳೆಯ ಚಾರಿತ್ರಿಕ ಧೋರಣೆಯ ಸೂಕ್ಷ್ಮ ಅಧ್ಯಯನ ಕ್ರಮವೇ ಜಾರಿಯಲ್ಲಿತ್ತು. ಪ್ರಾಪ್ ತನ್ನ ‘ಮಾರ್ಫಾಲಜಿ ಆಫ್ ದ ಫೋಕೆಟೇಲ್’ ಗ್ರಂಥವನ್ನು ಆ ವರ್ಷ ಪ್ರಕಟಿಸುವುದರ ಮೂಲಕ ಜಾನಪದ ಅಧ್ಯಯನದಲ್ಲಿ ವೈಜ್ಞಾನಿಕ ಶಕೆಯನ್ನು ಆರಂಭಿಸಿದ. ಜಾನಪದ ಅಧ್ಯಯನ ಇತಿಹಾಸದ ಮತ್ತೊಂದು ಮಹತ್ತ್ವಪೂರ್ಣವಾದ ಸಾಧನೆಯೆಂದರೆ 1955ರಲ್ಲಿ ಲೆವಿಸ್ಟ್ರಾಸ್ ಪುರಾಣಗಳ ರಾಚನಿಕ ಅಧ್ಯಯನ ಬರೆಹವನ್ನು ಪ್ರಕಟಿಸಿದ್ದು. ಪ್ರಾಪ್ ಅನಂತರ ಜಾನಪದ ರಾಚನಿಕ ವಿಶ್ಲೇಷಣಾ ಇತಿಹಾಸದ ಒಂದು ಮೈಲಿಗಲ್ಲು ಇದು. 1950ರ ವರೆಗೂ ಫ್ರಾನ್ಸ್ ಮತ್ತು ಸಂಯುಕ್ತ ಸಂಸ್ಥಾನಗಳಲ್ಲಿ ರಾಚನಿಕ ಮಾದರಿ ಅಧ್ಯಯನ ಆರಂಭವಾಗಿರಲಿಲ್ಲ. ಲೆವಿಸ್ಟ್ರಾಸ್ ತಮ್ಮ ಸಂಶೋಧನಾತ್ಮಕ ಬರೆಹಗಳಲ್ಲಿ ಹೊಸ ರೀತಿಯ ಪುರಾಣ ವಿಶ್ಲೇಷಣಾ ಮಾದರಿಯನ್ನು ಹುಟ್ಟುಹಾಕಿದ. ಇವನು ತಮ್ಮ ಅಧ್ಯಯನ ಕ್ರಮವನ್ನು ರೂಪಿಸಲು ಹೆಚ್ಚಾಗಿ ಆಧರಿಸಿದ್ದು ಭಾಷಾವಿಜ್ಞಾನದ ನೆರವನ್ನು. ಶ್ರೇಷ್ಠ ಭಾಷಾವಿಜ್ಞಾನಿ ಡಿ ಸಸ್ಸೂರ್‍ನ  ಸಿದ್ಧಾಂತದಿಂದ ನೇರ ಪ್ರೇರಣೆ ಪಡೆದ. ಸೂಚನಾ ಸಿದ್ಧಾಂತ, ತಳಿವಿಜ್ಞಾನ ಮತ್ತು ಇತರ ವಿಜ್ಞಾನಗಳಲ್ಲಿ ಮುನ್ನಡೆ ಸಾಧಿಸಿದ್ದ ಸಿದ್ಧಾಂತಗಳಿಂದಲೂ ಸಾಕಷ್ಟು ಪ್ರಭಾವಿತರಾಗಿ ಪುರಾಣಸೃಷ್ಟಿಯ ತಾರ್ಕಿಕ ಪ್ರಕ್ರಿಯೆಯನ್ನು ಪ್ರತಿಪಾದಿಸಿದ.

ಈತ ಪುರಾಣವನ್ನು-ಭಾಷೆಯಂತೆ-ಒಂದು ಸಂಕೇತ (ಕೋಡ್) ಎಂದು ಪರಿಗಣಿಸಿ ಅದನ್ನು ‘ಲಾಲಾಂಗ್’ ಮತ್ತು ರಾಪರೊಲ್ ಸಿಗ್ನಿಫೈಡ್, ಸಿಗ್ನಿಫೈಯಿಂಗ್, ಸಿಂಕ್ರಾನಿಕ್, ಡಯಕ್ರಾನಿಕ್ ಹಾಗೂ ಬೈನರಿಸಂ ಪರಿಭಾಷೆಗಳಲ್ಲಿ ಅರ್ಥೈಸಿದ್ದಾನೆ. ಇವು ಡಿ.ಸಸ್ಸೂರ್‍ನ ಪರಿಕಲ್ಪನೆಗಳು. ಸಸ್ಸೂರ್ ರಚನಾವಾದದಿಂದ ಆಕರ್ಷಿತನಾದ ಈತ ಬಹುಪಾಲು ಅವನ ಪರಿಕಲ್ಪನೆಗಳನ್ನು ಯಥಾವತ್ತಾಗಿ ಸ್ವೀಕರಿಸಿ ಸಂಸ್ಕೃತಿ ವಿಶ್ಲೇಷಣೆಯ ಹೊಸ ಮಾದರಿಗಳನ್ನು ಸೃಷ್ಟಿಸಿದ. ಇವನ ಪ್ರಯತ್ನವನ್ನು ರಾಚನಿಕ ಮಾದರಿ ವಿಶ್ಲೇಷಣೆಯ ದಿಟ್ಟಪ್ರಯತ್ನ ಎಂದು ಪರಿಗಣಿಸಲಾಗಿದೆ. ಅವನದು ಹೊಸದೃಷ್ಟಿ ಕೊಟ್ಟ ಮೂಲಭೂತ ಅಧ್ಯಯನ ಕ್ರಮವೂ ಹೌದು. ಅಪೂರ್ವ ಪ್ರತಿಭೆ ಮತ್ತು ಬೌದ್ಧಿಕ ದಿಟ್ಟತನಕ್ಕೆ ಹೆಸರಾದವನು  ಈತ ಇವನ ಕೆಲಸಗಳು ನಿರಂತರ ಚಿಂತನೆ ಮತ್ತು ಮರುಚಿಂತನೆಗೆ ಒಳ್ಳೆಯ ಆಹ್ವಾನ ಎನಿಸಿವೆ.

(ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ